ಗ್ಲಾಸಿನ ನೊಣ -
ಡಿಪ್ಟಿರ ಗಣದ ಮಸಿಡೀ ಕುಟುಂಬಕ್ಕೆ ಸೇರಿದ ಒಂದು ನೊಣ. ಟ್ಸೆಟ್ಸೀನೊಣ ಪರ್ಯಾಯನಾಮ. ಇದರಲ್ಲಿ ಸುಮಾರು 21 ಪ್ರಭೇದಗಳು ಇವೆ. ಅರೇಬಿಯದ ನೈಋತ್ಯ ಭಾಗದಲ್ಲಿ ಕಾಣಸಿಗುವ ಒಂದು ಪ್ರಭೇದವನ್ನು ಬಿಟ್ಟರೆ ಉಳಿದೆಲ್ಲವೂ ಆಫ್ರಿಕದಲ್ಲಿ ಮಾತ್ರ ಜೀವಿಸುತ್ತವೆ. ಗ್ಯಾಂಬಿಯ, ನೈಜೀರಿಯ, ಅಬಿಸೀನಿಯ, ಕೀನ್ಯ, ಉಗಾಂಡ, ಕಾಂಗೊ, ಅಂಗೋಲ ಮುಂತಾದೆಡೆಗಳಲ್ಲಿ ದಟ್ಟ ಕಾಡುಗಳಲ್ಲಿ ನೀರಿನ ಆಸರೆಯಿರುವಂಥಲ್ಲಿ ಇವುಗಳ ವಾಸ. ಇವು ದನ, ಕುದುರೆ ಮುಂತಾದ ಪ್ರಾಣಿಗಳ ಹಾಗೂ ಮಾನವನ ರಕ್ತವನ್ನು ಹೀರಿ ಬದುಕುತ್ತವೆ. ಇವುಗಳಲ್ಲಿ ಕೆಲವು ಬಗೆಯವು ಮನುಷ್ಯನಲ್ಲೂ, ಪ್ರಾಣಿಗಳಲ್ಲೂ ನಿದ್ರಾವಾತರೋಗವನ್ನು (ಸ್ಲೀಪಿಂಗ್ ಸಿಕ್‍ನೆಸ್) ಉಂಟುಮಾಡುವ ರೋಗಾಣುಗಳ ವಾಹಕಗಳು. ಇಂಥ ರೋಗವಾಹಕ ನೊಣಗಳಲ್ಲಿ ಮುಖ್ಯವಾದವು ಪಶ್ಚಿಮ ಮತ್ತು ಮಧ್ಯ ಆಫ್ರಿಕದಲ್ಲಿ ಕಾಣಸಿಗುವ ಗ್ಲಾ.ಪಾಲ್ಪಾಲಿಸ್ ಮತ್ತು ಪೂರ್ವ ಆಫ್ರಿಕದಲ್ಲಿ ಜೀವಿಸುವ ಗ್ಲಾ. ಮಾರ್ಸಿಟಾನ್ಸ್.

ಎಲ್ಲ ಬಗೆಯ ಗ್ಲಾಸಿನ ನೊಣಗಳೂ ದೃಢಕಾಯದ ಕೀಟಗಳು. ಇವುಗಳ ಗಾತ್ರ ಸಾಮಾನ್ಯ ನೊಣಕ್ಕಿಂತ ಹೆಚ್ಚು. ದೇಹದ ಬಣ್ಣ ಹಳದಿಯಿಂದ ಕಗ್ಗಂದಿನವರೆಗೆ ವ್ಯತ್ಯಾಸವಾಗುತ್ತದೆ. ಉದರ ಭಾಗದ ಮೇಲೆ ಪಟ್ಟಿಗಳಿವೆ. ಬಾಯ ವಿವಿಧ ಭಾಗಗಳು ಆತಿಥೇಯ ಪ್ರಾಣಿಯ ದೇಹವನ್ನು ಚುಚ್ಚಿ ರಕ್ತಹೀರಲು ಅನುಕೂಲವಾಗಿವೆ. ರಕ್ತ ಹೀರುವಾಗ ಕೆಳಕ್ಕೆ ಬಾಗುವ ಇವು ಬೇರೆ ಸಮಯಗಳಲ್ಲಿ ಸಮತಳವಾಗಿ ಇರುತ್ತವೆ. ಆಂಟಿನದ ಮೇಲೆ ಒಂದು ಬಿರುಗೂದಲಿನಂಥ ಅಂಗವಿದೆ. ಇದರ ಮೇಲೆ ಒಂಟಿಸಾಲಿನಲ್ಲಿ ಉದ್ದನೆಯ ಮತ್ತು ಕವಲೊಡೆದ ಕೂದಲುಗಳಿವೆ.

ಗ್ಲಾಸಿನ ನೊಣಗಳ ಆಯಸ್ಸು 1 - 3 ತಿಂಗಳುಗಳು. ಇವುಗಳಲ್ಲಿನ ಸೋಜಿಗದ ಸಂಗತಿಯೆಂದರೆ ಇವು ಮೊಟ್ಟೆಗಳನ್ನಿಡದೆ ನೇರವಾಗಿ ಮರಿಗಳನ್ನೇ ಹಾಕುವುದು. ಸಾಮಾನ್ಯವಾಗಿ ನೀರಿನ ಆಸರೆಯಿರುವಂಥ ಸ್ಥಳಗಳಲ್ಲಿ ಹೆಣ್ಣು ನೊಣ 10 ದಿವಸಗಳಿಗೊಮ್ಮೆ ಮರಿ ಹಾಕುತ್ತದೆ. ಮರಿಗಳ ಭ್ರೂಣಾವಸ್ಥೆ ಮತ್ತು ಡಿಂಭಾವಸ್ಥೆಗಳ ಅವಧಿ ಸುಮಾರು 9 ದಿವಸಗಳು. ತಾಯಿಯ ಗರ್ಭಕೋಶದ ಭಿತ್ತಿಯ ಮೇಲಿರುವ ಒಂದು ಜೊತೆ ಕ್ಷೀರಗ್ರಂಥಿಗಳಿಂದ ಒಸರುವ ದ್ರವರೂಪದ ಆಹಾರವನ್ನು ಕುಡಿದು ಮರಿಗಳು ಬೆಳೆಯುತ್ತವೆ. ಡಿಂಭಗಳು ಅನಂತರ ಮಣ್ಣನ್ನು ಕೊರೆದುಕೊಂಡು ಒಳಸೇರಿ ಕೋಶಾವಸ್ಥೆಯನ್ನು ಕಳೆಯುತ್ತವೆ. ಅನೇಕ ವಾರಗಳ ಮೇಲೆ ಪ್ರೌಢಜೀವಿಗಳಾಗಿ ಹೊರಬರುತ್ತವೆ.

ಗ್ಲಾಸಿನ ನೊಣಗಳ ಚಟುವಟಿಕೆ ವಾತಾವರಣದ ಉಷ್ಣತೆ ಮತ್ತು ಆದ್ರ್ರತೆಗಳನ್ನು ಅವಲಂಬಿಸಿ ಹೆಚ್ಚು ಕಡಿಮೆಯಾಗುತ್ತದೆ. ಉಷ್ಣತೆ ಹೆಚ್ಚಾಗಿದ್ದಾಗ, ಅಲ್ಲದೆ ಬೆಳಗ್ಗೆ ಹಾಗೂ ಸಂಜೆ ಇವುಗಳ ಚಟುವಟಿಕೆ ಹೆಚ್ಚು. ಗ್ಲಾ.ಬ್ರೆವಿಪಾಲ್ಪಾಲಿಸ್ ಎಂಬುದಕ್ಕೆ ಮಾತ್ರ ರಾತ್ರಿ ಕಾಲದಲ್ಲಿ ಚಟುವಟಿಕೆ ಉಂಟು. ಇವು ಜೀವಿಸುವ ಪೊದೆಗಳನ್ನು ನಾಶಮಾಡುವುದರಿಂದ, ಕೀಟನಾಶಕಗಳನ್ನು ಬಳಸುವುದರಿಂದ ಗ್ಲಾಸಿನ ನೊಣಗಳನ್ನು ನಿವಾರಿಸುತ್ತಾರೆ.								  (ಜಿ.ಆರ್.ಆರ್.ಎಸ್.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ